ಸೋಮವಾರ, ಅಕ್ಟೋಬರ್ 17, 2011

ದೀಪಾವಳಿಗೆ ನಾಲ್ಕು ಹಣತೆ..!



ಈ ಹಣತೆ ನಿಮ್ಮದೆ
ಕಾಪಾಡಿ ನಂದದೆ
ಬದುಕು ಬೊಗಸೆಯೊಳಗೆ
ದಾರಿಗೆ ಕೈ ನಡೆಸಿ ತೀರದವರೆಗೆ..!

ಒಲುಮೆಗೊಂದು ಹಣತೆ
ಹಗಲು-ರಾತ್ರಿಯ ನೊಗಕೆ
ಸುಖ-ದುಃಖ್ಖದ ಉಳುಮೆಯಲಿ ಎದೆಯ ನೆಲ
ಅಹಂ ಅಬ್ಬರವ ಮೆಟ್ಟಿ
ನಗು ಚಿಲುಮೆ ಚಿಮ್ಮಲಿ ಮನದಂಗಳ..!

ಈ ಬೆಳಕೇ ಅಮ್ಮನಂತೆ
ಕರುಳ ಬಳ್ಳಿಯ ಬತ್ತಿಗೆ
ತುಂಬು ಕಂಗಳ ಕಂಬನಿ ತೈಲದಂತೆ
ಕಗ್ಗತ್ತಲ ಸೀಳಿ ಬೆಳಕು ಖಡ್ಗದಂತೆ
ಉರಿದು ವಾತ್ಸಲ್ಯಕೆ ಚಿಮ್ಮಿ ಜಗದ ಹಣತೆ...!

ಮಮತೆಗೊಂದು ಹಣತೆ
ಹಬ್ಬಲಿ ಬೆಟ್ಟದ ತೋಳು
ಬೆನ್ನು ಬಿಕ್ಕಳಿಕೆ ತೀಡಿ ಸಾಂತ್ವನದ ಬೆರಳು
ಬದುಕು ಬಂಧನಕೆ ಕಟ್ಟಿ ಏಳುಕೋಟೆ
ಬಿಚ್ಚಿದರೂ ಬಿಚ್ಚದ  ನಂಟಿಗೆ ಗಂಟಿನಂತೆ..!

ಹಗಲೇ ಇರುಳಿನ ಉಸಿರು
ನಂಬಿಕೆಗೆ ಇನ್ನೊಂದು ಹೆಸರು
ಪ್ರೀತಿ ಹೆಣೆದ ದಿನಗಳ ದೇಹದೊಳಗೆ
ಹಗಲು-ರಾತ್ರಿಯ ಜೋಡಿ ಎತ್ತಿನಂತೆ
ಪ್ರೀತಿಗೊಂದು ಹಣತೆ, ಬದುಕು ಭಂಡಾರದೊಳಗೆ...!

ಈ ನಾಲ್ಕು ಹಣತೆ ನಿಮ್ಮದೇ
ಮನೆ-ಮನೆಯ ದೀಪಾವಳಿಗೆ
ನಂದದಿರಲಿ ಬದುಕು ತೀರದವರೆಗೆ...!
------------------------------------------------------------
-ರವಿ ಮೂರ್ನಾಡು.

4 ಕಾಮೆಂಟ್‌ಗಳು:

  1. ದೀಪಾವಳಿಯ ಸಂದರ್ಭದಲ್ಲಿ ದೀಪದ ಬಗ್ಗೆ ಒಂದು ಅರ್ಥಪೂರ್ಣ ಕವಿತೆ....
    ಕೊನೆಯ ಸಾಲಿನ ಆಶಯ, "ನಂದದಿರಲಿ ಬದುಕು ತೀರದವರೆಗೆ" ಚೆನ್ನಾಗಿದೆ..
    ತಮಗೂ ಮುಂಚಿತವಾಗಿಯೇ ದೀಪಾವಳಿ ಹಬ್ಬದ ಶುಭಾಶಯಗಳು...

    --

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಸುಷ್ಮಾ , ನಾಲ್ಕು ಹಣತೆ ನಿಮ್ಮ ಮನೆ- ಮನದಲ್ಲಿ ಬೆಳಗಲಿ. ಶುಭಾಶಯಕ್ಕೆ ಆತ್ಮದ ವಂದನೇ.

    ಪ್ರತ್ಯುತ್ತರಅಳಿಸಿ
  3. ಏ ಚೆನ್ನಾಗಿವೆ ರವಿ, ಈ ಸಾಲುಗಳು... ಮೊದಲನೆಯದಾಗಿ ದೀಪಾವಳಿ-ಹಣತೆ-ಬೆಳಕು ಇತ್ಯಾದಿ ಪರಿಕಲ್ಪನೆಗಳೇ ಅದಮ್ಯ ಜೀವಚೈತನ್ಯದ ಸೆಲೆಗಳು! ಆ ನಡುವೆ ಮುತ್ತಿನಂಥಾ ಸಾಲುಗಳೂ ಸೇರಿದರೆ, ಆ ಆಹ್ಲಾದತೆಗೆ ಸಾಟಿಯುಂಟೇ...!

    ಪ್ರತ್ಯುತ್ತರಅಳಿಸಿ
  4. olumegoMdu haNate, hagalu raatriya nogake., :) adhbhuta pada shrashTi. R.m. Sir :) dipagala habbake swaagata koruta.,nimagu shubhashayagalu:)

    ಪ್ರತ್ಯುತ್ತರಅಳಿಸಿ