ಮಂಗಳವಾರ, ಆಗಸ್ಟ್ 9, 2011

ಮಾತನಾಡುವ ದೇವರು..!


ಹಾಸಿಗೆಯಲ್ಲೇ ಅವನು ಮಗ್ಗಲು ಮಗುಚಿದ
ಬೆಳ್ಳಂಬೆಳಗ್ಗೆ..!
ಮಂದಿರದ ಸುಪ್ರಭಾತದ ಹಾಡಿಗೆ
ಮಸೀದಿಗೆ ಬಾ ಎಂದ
ಅಲ್ಲಾನ ಪ್ರಾರ್ಥನೆಗೆ..!
ಚರ್ಚಿನ ಗಂಟೆಯ ಸದ್ದಿಗೆ..!

ತಟ್ಟಿ ಎಚ್ಚರಿಸಿದ ಅಮ್ಮನ ಮಾತಿನೊಳಗೆ
ಕಣ್ಣುಜ್ಜಿ ಸೂರ್ಯನೊಂದಿಗೆ ಲೋಕವ ಅಳೆದ

ಪಟ್ಟಣದ ಬೀದಿಯಲಿ
ಮಂದಿರಕೆ ಕಾಲಿಟ್ಟವನು
ಶ್ಲೋಕಕ್ಕೆ ಮೈಮರೆತು ಭಕ್ತನಾದ
ಭಗವದ್ಗೀತೆ ಉಚ್ಚರಿಸಿ ವಿಭೂತಿಯಿಟ್ಟ..!
ಶಿಲಾ ದೇವರಿಗೆ ಕೈಮುಗಿದು
ಮಾತಾಡುವ ದೇವರ ಹುಡುಕಿ
ಬೀದಿಗೆ ನಿಂತ...!

ಆ ಬೀದಿ ರಸ್ತೆಯಲಿ
ಸಾಗರೋಪಾದಿಯ ಭಕ್ತರ ಮಸೀದಿ
ಎದೆಗೆ- ಎದೆ ಕೊಟ್ಟ ಸೋದರರ ಅಪ್ಪಿ
ಸಾಷ್ಠಾಂಗ ನಮಾಜು ಮುಗಿಸಿದ..!
ಕುರಾನ್‍ ಪಠಿಸಿ ರಸ್ತೆಗೆ ಬಂದು
ಆಗಸ ದಿಟ್ಟಿಸಿದ..!

ಬಾಚಿ ಕರೆಯಿತು ಗಂಟೆಯ ಸದ್ದು
ಫಾದರೊಡಗೂಡಿ ಕ್ರಿಸ್ತನ ಹಾಡು..!
"ಆಮೇನ್‍" ಎಂದುಸುರಿದಾಗ ಶಿಲುಬೆಗೆ ಮೇಣ ಬತ್ತಿ
ಬೈಬಲ್‍ನ ಪುಟ ಮಗುಚಿ ದೇವರ ಕರೆದ
ಚರ್ಚಿನ ಮೆಟ್ಟಿಲಿಳಿದು ಮನೆಗೆ ನಡೆದ..!

ಹಸಿಯುತ್ತಿದೆಯೇನೋ ಮಗನೇ..?!
ಜಗನ್ಮಾತೆಯ ಕಣ್ಣಿನಲ್ಲಿ ದೇವರ ಮುಖ
ಮಾತನಾಡುವ ಅಮ್ಮ ನಡೆದಾಡಿ ಹೇಳಿದಾಗ
ಮಂದಿರ-ಮಸೀದಿ-ಚರ್ಚು ಅವನ ಮನೆ
ಕೃಷ್ಣ-ಅಲ್ಲಾ-ಕ್ರಿಸ್ತ ಸುಮ್ಮನೆ...!
-----------------------------------------------------------------------
-ರವಿ ಮೂರ್ನಾಡು.

3 ಕಾಮೆಂಟ್‌ಗಳು:

 1. ಸಮಾಜದ ಕಣ್ಣು ತೆರೆದ ವಾಸ್ತವ ಚಿತ್ರಣ. ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 2. ಕವಿತೆ ನಿಜಕ್ಕೂ ಅದ್ಭುತ. ಮೊನ್ನೆ ನನಗೊಂದು SMS ಬಂದಿತ್ತು.
  "ದೇವರನ್ನು ಬಿಡು, ಅಮ್ಮನನ್ನು ಪೂಜಿಸು. ಯಾಕೆಂದ್ರೆ ದೇವರಿಗೂ ಕೂಡ ಜನ್ಮ ನೀಡಿದವಳು ಅಮ್ಮ"
  ಎಷ್ಟೊಂದು ಅರ್ಥಪೂರ್ಣ ಮಾತು ಅಲ್ವ?

  ಪ್ರತ್ಯುತ್ತರಅಳಿಸಿ
 3. ಅದ್ಭುತವಾಗಿ ಚಿತ್ರಿಸಿದ ವಾಸ್ತವ ಚಿತ್ರಣ!!! ನನಗೆ ತುಂಬ ಇಷ್ಟ ಆಯಿತು

  ಪ್ರತ್ಯುತ್ತರಅಳಿಸಿ