ಮಂಗಳವಾರ, ಜುಲೈ 26, 2011

ದುಃಖ್ಖವೇ ನಿನಗೆ ವಂದನೆ...!


ಸತ್ತ ಬೆಳಕಿನ ಸುತ್ತ
ಹುತ್ತ ಕಟ್ಟುತ್ತಿದೆ ಒಂದು ಕತ್ತಲು
ಸ್ಮಶಾನದಿಂದ ಮನೆಯವರೆಗೆ
ರಾತ್ರಿ ಬಿಚ್ಚುವ ನಗುವಿನ
ರೆಕ್ಕೆ ಮುರಿಯುತ್ತಿದೆ ಹಗಲು
ದುಃಖ್ಖವೇ ನಿನಗೇ ವಂದನೆ..!

ಕೋಣೆ-ಕೋಣೆಗಳ ಗಲ್ಲಕೆ
ತೊಟ್ಟಿಕ್ಕಿವೆ ಶೋಕ ಬಿಂಧು
ನೆಲವನ್ನಪ್ಪಿದ ನೆರಳಿಗೂ ಬಿಕ್ಕಳಿಕೆ
ಸತ್ತಂತ್ತಿವೆ ಬೆಳಕು ಹಣತೆಯೊಳಗೆ
ಮುಚ್ಚಿದ ಕಣ್ಣೊಳಗೂ ಕತ್ತಲೆ...!

ಈ ಜಗದ ರಾತ್ರಿಗಳಿಗೆ
ಮನೆ-ಮನೆ ರಾತ್ರಿಗಳ ಸಾಲು
ಬೆಳಕು ಕಾಣದ ಕುರುಡು ತೆಕ್ಕೆಯೊಳಗೆ
ಹಾಲ್ಗಲ್ಲದ ಹಸುಳೆಗಳ ಹಾಲಿಲ್ಲದ ಸ್ವರಗಳು
ಹಸುಳೆಯಿಲ್ಲದ ಗರ್ಭಗಳ ತಾಯ್ತನದ ಕೊರಗುಗಳು
ದುಃಖ್ಖವೇ ನಿನಗೆ ವಂದನೆ....!

ಗಾಳಿ ಲೆಕ್ಕಿಸದ ನಿಟ್ಟುಸಿರಿಗೆ
ಗೋಡೆಗೂ ಕೈ ಬಂದು ಅವುಚಿಕೊಳ್ಳುವ ಕನಸು
ಆಗಸದ  ಕತ್ತಲೆಗೂ ಹೊದಿಕೆ ನಗು
ನಿಂತ ನೆಲದ ಮೇಲೆ ಗೊತ್ತಿಲ್ಲ ಬಿರುಕುಗಳು
ದಿಕ್ಕಿಲ್ಲದೇ ಅಲೆದಾಡಿವೆ ಬೆಂಕಿ ಬಿರುಗಾಳಿಗಳು

ಮನದ ಭುವಿ ಜಲ ತೆರೆದು
ಸದ್ದೊಡೆವ ಆರ್ತಸ್ವರಗಳು
ಬಿಕ್ಕುತ್ತಿವೆ ನದಿಯಿಂದ-ಕಡಲಿಗೆ ದುಃಖ್ಖಗಳು
ಹರಿವ ದಾರಿಗೆ ಗೀಚಿ ಸುಕ್ಕುಗಳು
ಮರು ಹುಟ್ಟು ಕನಸುಗಳ ಮೌನ ಶವಯಾತ್ರೆಗಳು
ದುಃಖ್ಖವೇ ನಿನಗೆ ವಂದನೆ....!
----------------------------------------
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. ವಾ.. ವಾ... ಸರ್ ತುಂಬಾ ಸೊಗಸಾಗಿದೆ ಈ ರಚನೆ .. ಮೂರ್ನಾಲ್ಕು ಬಾರಿ ಓದಿದ ಮೇಲೆ , ಇಲ್ಲಿನ ಚಿತ್ರಣ ಮೆಲ್ಲಮೆಲ್ಲನೇ ಕಲ್ಪನೆಯೊಳು ಇಳಿಯುತ್ತಾ ಹೋಗಿದೆ.. ಕವಿತೆಯ ಅಂತ್ಯದಲ್ಲಿನ ಸಾಲುಗಳು ವಿಶೇಷ ಆಲೋಚನೆಯನ್ನು ಒದಗಿಸಿಕೊಡುತ್ತವೆ .. ಸರ್ .. :)

    ಪ್ರತ್ಯುತ್ತರಅಳಿಸಿ
  2. ಅಗಾಧ ನೋವಿನ ಸಾಗರದಲ್ಲೇ ಮುಳುಗುವ ಮನುಜನ ಸಮರ್ಥ ಚಿತ್ರಣ. ಭಾವತೀವ್ರತೆಯ ಪ್ರತಿ ಸಾಲಲೂ ವ್ಯಥೆಯ ಅಭ್ಯಂಜನ.

    ಪ್ರತ್ಯುತ್ತರಅಳಿಸಿ