ಗುರುವಾರ, ನವೆಂಬರ್ 3, 2011

ಘಳಿಗೆ ಗೀಚಿದಾಗ..!


ಹಗಲಿಡೀ ನಿದ್ದೆಗೆ ಬಿದ್ದು
ಆಕಳಿಸಿ ಕಣ್ತೆರೆದ ರಾತ್ರಿ
ಸಂಜೆ ಆರರ ಘಳಿಗೆ
ಬೊಗಸೆಯೊಡ್ಡಿ ಸ್ವಾಗತಿಸುತ್ತಿದೆ
ಗಾಳಿ ಸ್ಪರ್ಶಕೆ ಬಳುಕಿ
ಮನೆಯ ದೇವರ ದೀಪ

ಅಂಗಳದಿ ಬಣ್ಣ-ಬಳಿದಿದೆ ಕಪ್ಪು
ಕಗ್ಗತ್ತಲು ಸ್ಲೇಟು
ಬರೆಯುತಿದೆ ಮಿಣುಕು ಹುಳು
ಅಆಇಈ ಅಕ್ಷರದ ಸಾಲು..

ಕದಮುಚ್ಚಿ ಒಳ ಸುಳಿದ ರಾತ್ರಿ
ಇಣುಕಿದೆ ಹೆಜ್ಜೆಹೆಜ್ಜೆಗೆ ಕುರುಡು
ರೆಪ್ಪೆ ತೆರದ ದೀಪದ ಕಣ್ಣು
ಸಂದಿ-ಸಂದಿಗೆ ಅವಿತಿದೆ ಕಪ್ಪು
ದೀಪದಡಿ ಕಪ್ಪಿಟ್ಟ ನೆರಳಿಗೆ ಅಳು
ಇವರಿಬ್ಬರಿಗೆ ನಕ್ಕಿತು ಬೆಳಕು.!

ಬಾಯ್ಬಿಟ್ಟಿದೆ ಅಮ್ಮನಿಗೆ ಮಗು
ತೀಡುವಾಗ ಉಬ್ಬಿಗೆ ಕಪ್ಪು
ಅಳು ನಿಂತ ಹಾಲ್ಸ್ವರಕೆ ನಗು
ದೃಷ್ಠಿಗೆ-ಗಲ್ಲಕೆ ಇನ್ನೊಂದು ಕಪ್ಪು
ಜೀಕುತಿದೆ ತೊಟ್ಟಿಲು ಕತ್ತಲು ಕೈಗಳು 
ದೀಪ ಅದಕೆ ಕಾವಲು..!

ಮನೆ ಮುಚ್ಚಿದೆ ಕತ್ತಲೆಯ ಹೊದಿಕೆ
ದಿನ ದಾಟಿ ಹನ್ನೆರಡರ ಘಳಿಗೆ
ಕಣ್ತೆರೆದಿದೆ ದೇವರ ನಂದಾದೀಪ
ಕತ್ತಲೆಗೆ ತೂಗಿ ಮೈಯೊಡ್ಡಿ
ಕನಸುಗಳ ಬಿಚ್ಚಿಟ್ಟ ಮನಸು
ಮುಚ್ಚಿ ರೆಪ್ಪೆಯೊಳಗೆ ಕಪ್ಪು
ಬೆಚ್ಚಿವೆ ಉಸಿರ ಸದ್ದಿಗೆ ಮೌನ

ರಾತ್ರಿಯೆಲ್ಲಾ ನಿದ್ದೆಗೆ ಬಿದ್ದು
ಕತ್ತಲೆಯ ಮುಸುಕೆಳೆದ ಹಗಲು
ಮುಂಜಾವು ಆರರ ಘಳಿಗೆ
ಬೊಗಸೆಯೊಡ್ಡಿ ಸ್ವಾಗತಿಸುತ್ತಿದೆ
ಹಕ್ಕಿಗಳೊಂದಿಗೆ ಸೂರ್ಯ
ತೆರೆಯುತ್ತಿದೆ ದಿನಚರಿಯ ಪುಸ್ತಕ.
---------------------------------------
-ರವಿ ಮೂರ್ನಾಡು.

5 ಕಾಮೆಂಟ್‌ಗಳು:

 1. ಹೊರನಾಡಿನಲ್ಲಿದ್ದೂ ಭಾರತೀಯತೆಯನ್ನು ಮೆರೆಸುವವರು ನೀವು. ಸಂಜೆಗೆ ಮನೆಯ ದೇವರ ದೀಪ ಇನ್ನೂ ನೀವು ಆಚರಣೆಯಲ್ಲಿಟ್ಟಿದ್ದೀರ, ಭೇಷ್!

  ಇಲ್ಲಿ ಕೆಲವು ಚಿತ್ರಗಳು ನನ್ನ ಬಾಲ್ಯಕ್ಕೂ ತಳಕು ಹಾಕಿಕೊಂಡಿವೆ : ಮಿಂಚು ಹುಳ, ಸ್ಲೇಟು, ಸೀಮೆ ಎಣ್ಣೆ ಬುಡ್ಡಿ ದೀಪ, ನಂದಾ ದೀಪ ಹೀಗೆ. ಮತ್ತೆ ನೆನಪು ಮಾಡಿಕೊಟ್ಟಿರಿ, ಧನ್ಯವಾದಗಳು.

  ಇಲ್ಲಿನ ಎರಡು ಸಾಲು ನನಗೆ ಮೆಚ್ಚಿಗೆ ಆಯಿತು.
  "ಕದಮುಚ್ಚಿ ಒಳ ಸುಳಿದ ರಾತ್ರಿ
  ಇಣುಕಿದೆ ಹೆಜ್ಜೆಹೆಜ್ಜೆಗೆ ಕುರುಡು
  ರೆಪ್ಪೆ ತೆರದ ದೀಪದ ಕಣ್ಣು
  ಸಂದಿ-ಸಂದಿಗೆ ಅವಿತಿದೆ ಕಪ್ಪು
  ದೀಪದಡಿ ಕಪ್ಪಿಟ್ಟ ನೆರಳಿಗೆ ಅಳು
  ಇವರಿಬ್ಬರಿಗೆ ನಕ್ಕಿತು ಬೆಳಕು.!"

  ಒಳ ತೋಟಿಯನ್ನು ನಿಯಂತ್ರಿಸಿ ಆಗಾಗ ಆಣೆಕಟ್ಟಿನ ತೂಬನ್ನು ತೆರೆದು ನೀರು ಹರೆಸುವ ನಿಮ್ಮ ತಂತ್ರಕ್ಕೆ ಶಭಾಷ್ ಕೊಡಲೇ ಬೇಕು ಸಾರ್.

  ಪ್ರತ್ಯುತ್ತರಅಳಿಸಿ
 2. ರವಿ ಸರ್;ತುಂಬಾ ಸೊಗಸಾದ ಸಾಲುಗಳು.ಬಹಳ ಇಷ್ಟವಾಯಿತು.ಮನಸ್ಸಿಗೆ ಮುದ ನೀಡಿದ ಕವಿತೆ ಇದು.ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. ಅದೆಷ್ಟು ಚಂದದ ಕಲ್ಪನೆ ಸರ್...
  ಕತ್ತಲಿನ ಬಳಿಕವೇ ಬೆಳಕು...
  ಕಷ್ಟದ ಹಾದಿಯೇ ನೆಮ್ಮದಿಯ ಜೀವನಕ್ಕೆ ಮೊದಲು...
  ಮತ್ತೇ ಮತ್ತೇ ಪುನರಾವರ್ತನೆಯಾಗುವ ಕತ್ತಲು ಬೆಳಕಿನ ಜೀವನ ಆಟದ ಸುಂದರ ಪರಿಕಲ್ಪನೆ ಕವನದ ಸಾಲುಗಳಲಿದೆ..
  ಇಷ್ಟವಾಯ್ತು ಸರ್..

  ಪ್ರತ್ಯುತ್ತರಅಳಿಸಿ
 4. ಬೆಳಕಿನಿಂದ, ಹೊಸ ಬೆಳಕು ಹುಟ್ಟುವಂತೆ... ನೀವು ಕೂಡ ಹೊಸ ಪದಗಳನ್ನ ಹುಟ್ಟು ಹಾಕುತ್ತಲೆ ಇರುತ್ತಿರಿ ಸರ್ :) ನಿಮ್ಮ ಕವಿತೆ ಯಾವಾಗಲು ನನಗೆ ಇಷ್ಟವೆ :)

  ಪ್ರತ್ಯುತ್ತರಅಳಿಸಿ
 5. ಮೊದಲ ಸಾಲಲ್ಲೇ ನಿಮ್ಮ ಪ್ರಖರ ಕಾವ್ಯ ಪ್ರತಿಭೆಯ ದರ್ಶನ ಕೊಟ್ಟಿದ್ದೀರಿ.
  ದೀಪ ಅದಕೆ ಕಾವಲು ಎನ್ನುವಲ್ಲಿ ಪ್ರಯೋಗಶೀಲತೆಯು ಕಾಣುತ್ತದೆ.
  ಅತ್ಯಂತ ಖುಷಿಕೊಡುವ ಕವಿ ಮಿತ್ರ ನೀವು.

  ಪ್ರತ್ಯುತ್ತರಅಳಿಸಿ