ಮಂಗಳವಾರ, ನವೆಂಬರ್ 22, 2011

ಅವಳ ಕವಿತೆ


ನಾನು ಸುಂದರಾಂಗನಲ್ಲ
ನೀನು ಸುರಸುಂದರಿಯೂ ಅಲ್ಲ
ನಮ್ಮಿಬ್ಬರ ನಡುವೆ
ಒಂದು ಸ್ಪರ್ಶದ ನೆನಪು..!
ಉಸಿರ ಗಾಳಿಗೆ ಸೋಕಿ
ಕೆಂಡವಾಗುತ್ತಿದೆ ಕಣಕಿ
ಮರೆಯಲಾಗದ ಮಧುರ ಬಿಸುಪು..!

ಒಂದಷ್ಟು ಚಳಿಯಿತ್ತು
ನಿನ್ನಲ್ಲಿ ಬಿಸಿಯಿತ್ತು
ಮರವನ್ನಪ್ಪಿದ ಬಳ್ಳಿ ಮನಸ್ಸು..!
ಪ್ರೀತಿ ಭಾಷ್ಯದೊಳಗೆ
ಮಾತು ಕಲಿಸಿದ ನೀನು
ಒಲುಮೆಯಲಿ ಪದವಾದೆ ನಾನು..!

ಭಾಗ್ಯದ ಕದ ತೆರೆದೆ
ಎದೆಗೆ ಕೈಯಿಟ್ಟು ಕರೆದೆ
ಭುಜದೊಳಗೆ ಮುಖವಿಟ್ಟೆ
ನೀನು ತಾಯಿ
ಮುಂಗುರುಳಿಗೆ ಬೆರಳಿಟ್ಟೆ
ನಾನು ಸ್ವಾಮಿ..!

ಆ ದೀಪ ನಕ್ಕಿತು ನಾಚಿ
ಚಂದ್ರಿಕೆಯ ಮುಖದಲ್ಲಿ ಬೆಳಗಿ
ರೆಪ್ಪೆ ಮುಚ್ಚಿತು ನಮಗೆ ಬಾಗಿ
ಶಿರಭಾಗಿ ನಮಿಸಿದೆನು
ಪೂಜೆ ನಿನಗೆ ದೇವಿ
ಹೋಮ-ಧೂಪ- ಹವನ
ನಾ ನಿನಗೆ ತೀರ್ಥ-ಹಣ್ಣು-ಕಾಯಿ..!

ಬದುಕುತ್ತಿದೆ ಬರವಣಿಗೆ
ಭೋಗ-ಭಾಗ್ಯದ ಮೆರವಣಿಗೆ
ರಂಭೆ-ಮೇನಕೆಯ ಜೊತೆಗೆ ಕವಿತೆ
ನಾನು ಪಡೆದವನಲ್ಲ
ನೀನು ತಿರಸ್ಕರಿಸಲೂ ಇಲ್ಲ
ನಡುವೆ ಸುಳಿಯಲಿ ನಕ್ಕು
ಸುಖದ ನೆನಪಿನ ಗಾಳಿ...!
-ರವಿ ಮೂರ್ನಾಡು

8 ಕಾಮೆಂಟ್‌ಗಳು:

  1. ಶೃಂಗಾರ ರಸ ತುಂಬಿ ತುಳುಕಿತ್ತಿದೆ ಈ ಕಾವ್ಯದಲ್ಲಿ. ಹಠಾತ್ತನೆ ಅರಗಿಸಿಕೊಳ್ಳದಷ್ಟು ಗಾಢವಾಗಿ ಚಿತ್ರಿಸುತ್ತಾನೆ ನಿಮ್ಮಲ್ಲಿನ ಕವಿ. ಕವಿತೆ ತುಂಬಾ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ
  2. ಕಾವ್ಯ ಕನ್ನಿಕೆಯ ಸಾದೃಷ್ಯ ವರ್ಣನೆ.

    ಆಕೆ ನಿಮಗೆ ಒಲೆದಿದ್ದಾಳೆ. ಪದ ಪದಗಳಲ್ಲೂ ಆಕೆ ಸಾಲಂಕೃತವಾಗಿ ನರ್ತಿಸುತ್ತಿದ್ದಾಳೆ.

    ಆರಂಭದಲ್ಲಿ ಕಟ್ಟಿಕೊಟ್ಟ ಶೃಂಗಾರ ಲಾಸ್ಯದಿಂದ ಕಡೆಗದನ್ನೇ ಅರ್ಪಣೆಯ ಲಾಲಿತ್ಯಕ್ಕೆ ತಿರುಗಿಸುವ ನಿಮ್ಮ ಕೃಷಿಕ ಮನಸ್ಸು ಮೆಚ್ಚಿಗೆಯಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಕವನದಲ್ಲಿರುವ ಪದ ಚಿತ್ತಾರ, ಭಾವ ಲಹರಿ ಮೈಮನಗಳನ್ನು ರೋಮಾಂಚನಗೊಳಿಸುತ್ತಿದೆ. ಇಂತವರ ಕವಿತೆಗಳನ್ನು ನೋಡಿಯೇ ಅಲ್ಲವೇ ನಾವೆಲ್ಲಾ ಕಲಿತದ್ದು. ಪ್ರತಿದಿಕ್ಕಿನಲ್ಲೂ ಕವಿತೆ ಬರೆಯುವ ಶಕ್ತಿ ಇರುವವರ ಮಧ್ಯೆ ಬೆಳೆಯುತ್ತಿರುವ ನಾವುಗಳು ಧನ್ಯರು... ತುಂಬಾ ಇಷ್ಟವಾಯಿತು ರವಿಯಣ್ಣ.... .

    ಪ್ರತ್ಯುತ್ತರಅಳಿಸಿ
  4. ಅದ್ಭುತ ಅನುಭೂತಿ ನೀಡಿತು.ವರ್ಣಿಸಲು ಸಾಧ್ಯವಾಗುತ್ತಿಲ್ಲ.ಇಹದ ಬದುಕು ಜೀಕುತಿದೆ ತಾವೇ ತಮಗೆಂಬಂತೆ.ಬಾಡುವ ಸುಮಗಳಿಗೆ ಸಿಂಚನವೆರೆದು ಪ್ರಶ್ನಿಸುವ ಮನೋಭಿಲಾಷೆಯು ಅತ್ಯಾನಂದ ನೀಡುವದು.ವರ್ಣಿಸಲು ಸಮಯ ಬೇಕು.

    ಪ್ರತ್ಯುತ್ತರಅಳಿಸಿ